ಧರ್ಮಪಾಲಕ
 	ಕ್ರಿ. ಶ. ಐದನೆಯ ಶತಮಾನದ ಸುಮಾರಿಗೆ ಕಾಂಚೀಪುರದಲ್ಲಿ ಹುಟ್ಟಿದ ಈ ಬ್ರಾಹ್ಮಣ ಬೌದ್ಧಮತವನ್ನವಲಂಬಿಸಿ ಸಿಂಹಳದ ಅನೂರಾಧಪುರದ ಮಹಾವಿಹಾರದಲ್ಲಿ ಉತ್ತಮ ಪಂಡಿತನೆಂದು ಖ್ಯಾತನಾದ.  ಬುದ್ಧಘೋಷನ ಸಮಸಾಮಯಿಕವಾದ ಈತ ಇತಿವುತ್ತಕ, ಉದಾನ, ಚರಿಯಾಪಿಟಕ, ಥೇರಗಾಥಾ, ವಿಮಾನವತ್ಥು, ಪೇತವತ್ಥು ಎಂಬ ಪಾಳೀ ಪ್ರಕರಣಗಳಿಗೆ ಪರಮತತ್ಥದೀಪನೀಯೆಂಬ ವ್ಯಾಖ್ಯಾನವನ್ನು (ಅರ್ಥಕಥೆ) ರಚಿಸಿದ್ದಾನೆ.  ನೇತ್ತಿಯೆಂಬ  ಪ್ರಕರಣಕ್ಕೂ ಈತನ ವ್ಯಾಖ್ಯೆಯಿದೆಯೆಂದು ಸಾಸನವಂಸ ತಿಳಿಸುತ್ತದೆ.  ಈತ ಸಿಂಹಳಕ್ಕೆ ಸಮೀಪದಲ್ಲೇ ದಕ್ಷಿಣ ಕರಾವಳಿಯಲ್ಲಿ ಪದರತಿಥ್ಥವೆಂಬಲ್ಲಿ ಇದ್ದು ಮಹಾವಿಹಾರದಲ್ಲಿ ವ್ಯಾಸಂಗ ಮಾಡಿದನೆಂದು ಒಂದು ಪ್ರತೀತಿಯಿದೆ.  ಮೇಲೆ ಹೇಳಿದ ಖುದ್ದಕನಿಕಾಯ ಗ್ರಂಥಗಳಿಗೆ ಈತ ಬರೆದ ಬೇರೆ ಬೇರೆ ವ್ಯಾಖ್ಯೆಗಳಿಗೆ ಪರಮತ್ಥಮಂಜೂಷಾ, ಲೀನತ್ಥಪ್ಪಕಾಸಿನೀ, ನೇತ್ರಥ್ಥ ಕಥಾಟೀಕಾ, ತನಥ್ಥವಣ್ಣನಾ, ಪರಮತ್ಥದೀಪನೀಯೆಂದು ಬೇರೆ ಬೇರೆ ಹೆಸರುಗಳನ್ನೂ ಹೇಳುವ ಸಂಪ್ರದಾಯವಿದೆ.
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ